ರಾಷ್ಟ್ರಕವಿ ಕುವೆಂಪು

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ,ಕಾದಂಬರಿಕಾರ,ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಬಾಲ್ಯ
ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಶಿಕ್ಷಣ
ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಪಡೆದರು. ಟಿ.ಎಸ್.ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ನಂತರ ಪ್ರಾಂಶುಪಾಲರೂ ಆಗಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.
ವೈವಾಹಿಕ ಜೀವನ
ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ಸಾಹಿತ್ಯ ಮತ್ತು ಕೃತಿಗಳು
ಮಹಾಕಾವ್ಯ
ಶ್ರೀ ರಾಮಾಯಣ ದರ್ಶನಂ (1949)
ಖಂಡಕಾವ್ಯಗಳು
ಚಿತ್ರಾಂಗದಾ (1936)

ಕವನ ಸಂಕಲನಗಳು
ಕೊಳಲು (1930)
ಪಾಂಚಜನ್ಯ (1933)
ನವಿಲು (1934)
ಕಲಾಸುಂದರಿ (1934)
ಕಥನ ಕವನಗಳು (1937)
ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
ಪ್ರೇಮ ಕಾಶ್ಮೀರ (1946)
ಅಗ್ನಿಹಂಸ (1946)
ಕೃತ್ತಿಕೆ (1946)
ಪಕ್ಷಿಕಾಶಿ (1946)
ಕಿಂಕಿಣಿ (ವಚನ ಸಂಕಲನ) (1946)
ಷೋಡಶಿ (1946)
ಚಂದ್ರಮಂಚಕೆ ಬಾ ಚಕೋರಿ (1957)
ಇಕ್ಷುಗಂಗೋತ್ರಿ (1957)
ಅನಿಕೇತನ (1963)
ಜೇನಾಗುವ (1964)
ಅನುತ್ತರಾ (1965)
ಮಂತ್ರಾಕ್ಷತೆ (1966)
ಕದರಡಕೆ (1967)
ಪ್ರೇತಕ್ಯೂ (1967)
ಕುಟೀಚಕ (1967)
ಹೊನ್ನ ಹೊತ್ತಾರೆ (1976)
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)

ಕಥಾ ಸಂಕಲನ
ಸಂನ್ಯಾಸಿ ಮತ್ತು ಇತರ ಕಥೆಗಳು (1936)
ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು
ಕಾನೂರು ಹೆಗ್ಗಡತಿ (1936)
ಮಲೆಗಳಲ್ಲಿ ಮದುಮಗಳು.(1967)

ನಾಟಕಗಳು
ಯಮನ ಸೋಲು (1928)
ಜಲಗಾರ (1928)
ಬಿರುಗಾಳಿ (1930)
ವಾಲ್ಮೀಕಿಯ ಭಾಗ್ಯ (1931)
ಮಹಾರಾತ್ರಿ (1931)
ಸ್ಶಶಾನ ಕುರುಕ್ಷೇತ್ರಂ (1931)
ರಕ್ತಾಕ್ಷಿ (1933)
ಶೂದ್ರ ತಪಸ್ವಿ (1944)
ಬೆರಳ್‍ಗೆ ಕೊರಳ್ (1947)
ಬಲಿದಾನ (1948)
ಚಂದ್ರಹಾಸ (1963)
ಕಾನೀನ (1974)

ಪ್ರಬಂಧ
ಮಲೆನಾಡಿನ ಚಿತ್ರಗಳು (1933)

ವಿಮರ್ಶೆ
ಕಾವ್ಯವಿಹಾರ (1946)
ತಪೋನಂದನ (1950)
ವಿಭೂತಿಪೂಜೆ (1953)
ದ್ರೌಪದಿಯ ಶ್ರೀಮುಡಿ (1960)
ರಸೋ ವೈ ಸಃ (1963)
ಇತ್ಯಾದಿ (1970)

ಆತ್ಮಕಥೆ
ನೆನಪಿನ ದೋಣಿಯಲ್ಲಿ:ಕುವೆಂಪು ಮದುವೆ ಪ್ರಸಂಗ
ಜೀವನ ಚರಿತ್ರೆಗಳು
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ

ಅನುವಾದ
ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
ಕೊಲಂಬೋ ಇಂದ ಆಲ್ಮೋರಕೆ
ಭಾಷಣ-ಲೇಖನ
ಸಾಹಿತ್ಯ ಪ್ರಚಾರ (1930)
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
ಷಷ್ಠಿನಮನ (1964)
ಮನುಜಮತ-ವಿಶ್ವಪಥ (1971)
ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ
ಅಮಲನ ಕಥೆ (1924)
ಮೋಡಣ್ಣನ ತಮ್ಮ (ನಾಟಕ) (1926)
ಹಾಳೂರು (1926)
ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
ನನ್ನ ಗೋಪಾಲ (ನಾಟಕ) (1930)
ನನ್ನ ಮನೆ (1946)
ಮೇಘಪುರ (1947)
ಮರಿವಿಜ್ಞಾನಿ (1947)
ನರಿಗಳಿಗೇಕೆ ಕೋಡಿಲ್ಲ (1977)

ಇತರೆ
ಜನಪ್ರಿಯ ವಾಲ್ಮೀಕಿ ರಾಮಾಯಣ
ಆಯ್ದ ಸಂಕಲನಗಳು
ಕನ್ನಡ ಡಿಂಡಿಮ (1968)
ಕಬ್ಬಿಗನ ಕೈಬುಟ್ಟಿ (1973)
ಪ್ರಾರ್ಥನಾ ಗೀತಾಂಜಲಿ (1972)
ಗೌರವ/ ಪ್ರಶಸ್ತಿ ಪುರಸ್ಕಾರಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955)
ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956)
ಪದ್ಮಭೂಷಣ (೧೯೫೮)
ರಾಷ್ಟ್ರಕವಿ ಪುರಸ್ಕಾರ (೧೯೬೪)
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979)
ಪಂಪ ಪ್ರಶಸ್ತಿ (೧೯೮೮)
ಪದ್ಮವಿಭೂಷಣ (೧೯೮೯)
ಕರ್ನಾಟಕ ರತ್ನ (೧೯೯೨)
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ
ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ)
ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು.(2017 ಡಿಸೆಂಬರ್ 29)

ವಿಶ್ವ ಮಾನವ ದಿನ
ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.

ನಿಧನ
ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ರಿಂದ,
ನಿರ್ವಾಹಕ

Comments